ಕರಿಬಸವ ದೇಶಿಕೇಂದ್ರ2 : ಶ್ರೀಶೈಲ ಪಂಡಿತಾರಾಧ್ಯ ಪೀಠ ಪರಂಪರೆಯವನಾದ ಈತ ಗುಯಲೂರು ಮಠಾಧ್ಯಕ್ಷನಾಗಿದ್ದ. ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದ ಅಚ್ಯುತರಾಯನಿಗೆ (1530-75) ಗುರುವಾಗಿದ್ದನೆಂದು ತಿಳಿದುಬರುತ್ತದೆ. ಮಹಾಪುರುಷನೆಂದು ಪ್ರಸಿದ್ಧನಾಗಿದ್ದ ಈತ ಪೆನುಗೊಂಡೆಗೆ ಸು. 15 ಕಿಮೀ ದೂರದಲ್ಲಿರುವ ಸೋಮಲಾಪುರದಲ್ಲಿ ತಪೋಮಗ್ನನಾಗಿದ್ದನೆಂದೂ ವಿಜಯನಗರದ ಉಪರಾಜಧಾನಿ ಯಾಗಿದ್ದ ಪೆನುಗೊಂಡೆಯಲ್ಲಿದ್ದ ಅಚ್ಯುತರಾಯ ಈತನ ಮಹಿಮೆಯನ್ನು ಕೇಳಿ ಗುರುದರ್ಶನಕ್ಕಾಗಿ ಬಂದನೆಂದೂ ಆಗ ಈತ ಮಂತ್ರೋದಕ ಪ್ರಭಾವದಿಂದ ಅಲ್ಲಿ ಒಣಗಿ ನಿಂತಿದ್ದ ಮಾವಿನ ಮರವನ್ನು ಚಿಗುರಿಸಿ, ಫಲಬಿಡಿಸಿ, ಅವುಗಳನ್ನೇ ರಾಜನಿಗೆ ಆಶೀರ್ವದಿಸಿ ಕೊಟ್ಟನೆಂದೂ ಶ್ರೀಶೈಲಪಂಡಿತಾರಾಧ್ಯ ಚರಿತ್ರೆಯಲ್ಲಿ ಉಕ್ತವಾಗಿದೆ. ಈ ಪವಾಡವನ್ನು ಇಡಗೂರು ರುದ್ರಕವಿ ಉಲ್ಲೇಖಿಸಿದ್ದಾನೆ. ಗುರುಪ್ರಭಾವಕ್ಕೆ ಮೆಚ್ಚಿದ ರಾಜ ಅಲ್ಲಿ ಈತನಿಗೆ ಮಠವನ್ನು ಕಟ್ಟಿಸಿ ಮಾನ್ಯ ಮಿರಾಸೆಗಳನ್ನು ನೀಡಿದುದಾಗಿ ಶಾಸನಗಳಿಂದ ತಿಳಿದುಬಂದಿದೆ.	(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ